ಮಾತೃರಾಜ
9ನೆಯ ಶತಮಾನಕ್ಕಿಂತ ಹಿಂದಿನವ. ಚೇದಿದೇಶದ ಅರಸ. ತಾಪಸ-ವತ್ಸರಾಜ (ಅನಂಗ ಹರ್ಷ) ನಾಟಕದ ಕರ್ತೃ. ಉದಯನನ ಕಥೆಯನ್ನು ಕುರಿತ ಆರು ಅಂಕಗಳ ಈ ನಾಟಕ ಆನಂದವರ್ಧನ, ಕುಂತಕ, ಅಭಿನವಗುಪ್ತ, ಭೋಜ, ಧನಿಕ ಮುಂತಾದ ಅಲಂಕಾರಿಕರೆಲ್ಲರಿಂದಲೂ ಹೆಚ್ಚಿನ ಪ್ರಶಂಸೆಗೆ ಪಾತ್ರವಾಗಿ ಮೇಲಿಂದ ಮೇಲೆ ಉದಾಹೃತವಾಗಿದೆ. ಮಾತೃರಾಜ, ಮಾಯುರಾಜ ಎಂದೂ ಇವನ ನಾಮಾಂತರಗಳು. ಈತ ರಚಿಸಿರುವ ಉದಾತ್ತರಾಘವ ಎಂಬ ಮತ್ತೊಂದು ನಾಟಕ ಈಗ ಉಪಲಬ್ಧವಿಲ್ಲ.

	ತಾಪಸ-ವತ್ಸರಾಜ ನಾಟಕವಾದರೂ ಇತ್ತೀಚಿನತನಕ ಲುಪ್ತಪ್ರಾಯವಾಗಿತ್ತು. ಇದರ ಒಂದೇ ಅಪೂರ್ಣ ಹಾಗೂ ಅಶುದ್ಧ ಹಸ್ತಪ್ರತಿ ಬರ್ಲಿನ್‍ನಲ್ಲಿತ್ತು. ಅದರ ಫೋಟೋಪ್ರತಿ ತರಿಸಿ ಪರಿಷ್ಕರಿಸಿ ಮೊತ್ತಮೊದಲು 1929ರಲ್ಲಿ ಪ್ರಕಟಗೊಳಿಸಿದ ಯಶಸ್ಸು ಮೇಲುಕೋಟೆಯ ಯತಿರಾಜ ಸ್ವಾಮಿಗಳದು.
ಈ ನಾಟಕದಲ್ಲಿ ನಾಯಕನಾಗಿ ವತ್ಸರಾಜ ವಾಸವದತ್ತೆ ಬೆಂಕಿಯಲ್ಲಿ ಸತ್ತಳೆಂಬ ಶೋಕದಿಂದ ಉನ್ಮತ್ತನಾಗಿ ತಾಪಸಪ್ರಾಯನಾಗುತ್ತಾನೆ. ಉಪಾಯದಿಂದ ಮಂತ್ರಿ ಯೌಗಂಧರಾಯಣ ಚಿತ್ರದರ್ಶನದಿಂದ ಅನುರಕ್ತಳಾಗಿರುವ ಪದ್ಮಾವತಿಯನ್ನು ಆತನಿಗೆ ಮದುವೆ ಮಾಡಿಸುತ್ತಾನೆ. ತಾಪಸಿಯಾಗಿರುವ ವಾಸವದತ್ತೆ, ತಾಪಸನಾದ ವತ್ಸರಾಜ ಇಬ್ಬರೂ ಪ್ರಯಾಗದಲ್ಲಿ ಆತ್ಮಹತ್ಯೆಯ ಪ್ರಯತ್ನದಲ್ಲಿರುವಾಗ ನಾಟಕೀಯವಾಗಿ ಅವರ ಪುನಸ್ಸಮಾಗಮ ಉಂಟಾಗುತ್ತದೆ.

ನಾಟಕದಲ್ಲಿ ವಿಪ್ರಲಂಭಶೃಂಗಾರ ಪ್ರತಿಪಾದನೆ ಹೃದಯಂಗಮವಾಗಿದೆ; ಶೈಲಿ ಸರಳ ಸುಲಭವಾಗಿದೆ. ಪ್ರಾಕೃತ ಪಾಠಗಳಲ್ಲಿ ಅಶುದ್ಧಿ ಹೆಚ್ಚೆಂಬುದೊಂದೇ ಕೊರತೆ.						
 (ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ